ಹೆಸರಿಗೆ ಸರ್ಕಾರಿ ನೌಕರಿ: ದುಡಿದದ್ದು ನಲ್ವತ್ತೊಂದು ವರ್ಷ ಬರೋಬ್ಬರಿ: ಸಂಬಳ ಮಾತ್ರ ತಿಂಗಳಿಗೆ ಹದಿನೈದೇ ರೂಪಾಯಿ!
| ಅಕ್ಕು-ಲೀಲಾ |
ಖಾಸಗಿ ಸುದ್ದಿವಾಹಿನಿಯಲ್ಲಿ ಕೆಲಸ ಮಾಡುತ್ತಿರೋ
ನಾನು ಆ ದಿನ ಯಾವುದೇ ಸ್ಪೇಷಲ್ ಸ್ಟೋರಿಯ ಪ್ಲಾನ್ ಮಾಡದೇ ಆಫೀಸಿನಲ್ಲೇ ಕೂತಿದ್ದೆ.
ಇನ್ನೊಂದು ಸುದ್ದಿವಾಹಿನಿಯ ಗೆಳೆಯನಿಂದ ಪೋನ್ ಕಾಲ್ ಬಂತು. ಆ ಕಡೆಯಿಂದ ಆತ ‘ಬಾ
ಮಾರಾಯ ಇವತ್ತು ಒಂದು ಎಕ್ಸ್ಕ್ಲೂಸಿವ್ ಸ್ಟೋರಿ ಸಿಕ್ಕಿದೆ’ ಅಂತಾ ಅನ್ನುತ್ತಲೇ ಸ್ಟೋರಿಯ ತಲೆಬುಡ
ವಿಚಾರಿಸದೆ ತಡಬಡಾಯಿಸುತ್ತಾ ಪೋನ್ ಕಟ್ ಮಾಡಿ
ಅವನ ಆಫೀಸಿನತ್ತ ನನ್ನ ಬೈಕ್ ಸ್ಟಾಟ್ ಮಾಡಿ ಹೊರಟೆ.
ಅವನನ್ನು ಹಿಂಬಾಲಿಸುತ್ತಾ ಹೋದವನು
ಉಡುಪಿಯ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಬಳಿ ನಿಂತಿದ್ದೆ.
| ಡಾ.ರವೀಂದ್ರನಾಥ ಶ್ಯಾನುಭಾಗ್ ಅವರೊಟ್ಟಿಗೆ ಅಕ್ಕು-ಲೀಲಾ |
ಮರುಯೋಚಿಸದೆ ಒಂದು ಎಕ್ಸ್ ಕ್ಲೂಸಿವ್ ಸ್ಟೋರಿಯ ತಯಾರಿಗೆ ನಾನು
ಸಿದ್ದನಾಗಿಯಾಗಿತ್ತು. ಆ
ಸ್ಟೋರಿಯ ವಿವರವನ್ನು ನನ್ನ ವಾಹಿನಿಗೂ ಕಳುಹಿಸಿಕೊಟ್ಟೆ. ಆ ಕರುಣಾಜನಕ
ಕಥೆ ನಾನು
ಕಾರ್ಯನಿರ್ವಹಿಸುತ್ತಿರುವ ವಾಹಿನಿಯೂ ಸೇರಿ ಟಿಆರ್ಪಿಗಾಗಿ ಕತ್ತಿಮಸಿಯುವ ಕನ್ನಡದ ಎಲ್ಲಾ ಸುದ್ದಿವಾಹಿನಿಗಳಲ್ಲೂ
ಬಂದಿದ್ದು ಆಯಿತು. ಆದರೆ ಆ ಸ್ಟೋರಿ ಮಾಡಿದ
ಖುಷಿಯಿಂದಲೋ ಅಥವಾ ಆ ತಾಯಂದಿರಿಗೆ ನ್ಯಾಯಸಿಗಲಿಲ್ಲವಲ್ಲ ಅನ್ನೋ ನೋವಿನಿಂದಲೋ ಗೊತ್ತಿಲ್ಲ.
ಅಷ್ಟಕ್ಕೇ ತೃಪ್ತಿಪಡದೆ ಅವರ ಸಮಸ್ಯೆಯ ಬೆನ್ನುಬಿದ್ದು ಅವರಿಗೆ
ನ್ಯಾಯದೊರಕಿಸುವಲ್ಲಿ ಹೋರಾಟ ಮಾಡುತ್ತಿರುವ
ಡಾ. ರವೀಂದ್ರ ಶಾನಭಾಗ್ ರ ಬಳಿ ಮತ್ತಷ್ಟು ದಾಖಲೆಗಳನ್ನು ಪಡೆದು ಆ ಸ್ಟೋರಿಯ ಪೂರ್ತಿ ಸಾರಾಂಶವನ್ನು
ಮತ್ತೆ ಸಂವೇದನಾಶೀಲ ಮನಸ್ಸುಗಳಿಗೆ ಮುಟ್ಟಿಸುವ ದೃಷ್ಟಿಯಿಂದ ಆ ಕತೆಗೆ ಮತ್ತೆ ಅಕ್ಷರದ ರೂಪಕೊಡಲು
ಪ್ರಯತ್ನಿಸಿದ್ದೇನೆ.
**********
**********
ಇದು ಕಳೆದ 41 ವರ್ಷಗಳಿಂದ ಉಡುಪಿಯ ಸರ್ಕಾರಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ
ಸಂಸ್ಥೆಯಲ್ಲಿ ಪಾಯಿಖಾನೆ ತೊಳೆಯುವ ಮತ್ತು ಕಸಗುಡಿಸುವ ಕೆಲಸ
ನಿರ್ವಹಿಸುತ್ತಿರುವ ಇಬ್ಬರು ಹೆಣ್ಣುಮಕ್ಕಳ
ಕತೆ. 1971ರಲ್ಲಿ ಈ ತರಬೇತಿ ಸಂಸ್ಥೆಯಲ್ಲಿ ಕಸಗುಡಿಸುವ (ಸ್ವೀಪರ್) ಹುದ್ದೆ ಖಾಲಿಯಾದಾಗ
ಉದ್ಯೋಗ ವಿನಿಮಯ ಕೇಂದ್ರದ ಮೂಲಕ ಕ್ರಮಬದ್ದವಾಗಿಯೇ ನೇಮಕವಾದ ಅಕ್ಕುವಿಗೆ ಆಗ 18ವರ್ಷ. ‘ಸದ್ಯಕ್ಕೆ
ತಾತ್ಕಾಲಿಕ ನೆಲೆಯಲ್ಲಿ 15 ರೂಪಾಯಿಗಳ ಮಾಸಿಕ ವೇತನ ಮಾತ್ರ
ಸಿಗುತ್ತೆ, ಆದಷ್ಟು ಶೀಘ್ರದಲ್ಲಿ ನಿಮ್ಮ ಹುದ್ದೆಯ ಮಂಜೂರಾತಿ
ಬಂದಾಗ ನಿಮಗೆ ಹಿಂದಿನ ಬಾಕಿ ಸಹಿತ ಪೂರ್ಣಾವಧಿ ಸಂಬಳ ಸಿಗಲಿದೆ’ ಎಂದು ಸಂಸ್ಥೆಯ ಪ್ರಾಂಶುಪಾಲರೇ ಭರವಸೆ
ನೀಡುದಾಗ ಅಕ್ಕು ನಂಬಿದರು,
| ಅಕ್ಕು |
| ಲೀಲಾ |
1929ರಲ್ಲಿ ಇದೇ ಕೆಲಸಕ್ಕಾಗಿ ಅಕ್ಕುವಿನ
ತಾಯಿ ಸೇಸಿ ಕೆಲಸಕ್ಕೆ ನೇಮಕವಾಗಿದ್ದಾಗ ಅವಳಿಗೆ ಸಿಗುತ್ತಿದ್ದ
ಸಂಬಳ ತಿಂಗಳಿಗೆ ಆರು ರೂಪಾಯಿ. ಅದು ಅದ್ಹೇಗೋ
ಹೆಚ್ಚುತ್ತಾ ಬಂತು. ಹಾಗಾಗಿ
ಸಾಯುವಾಗ (1971ರಲ್ಲಿ) ಸೇಸಿಗೆ ಸಿಗುತ್ತಿದ್ದ ಸಂಬಳ 15 ರೂಪಾಯಿ! ಅದೇ
ಸಂಬಳಕ್ಕೆ ಇದೀಗ ಅಕ್ಕು ದುಡಿಯುವುದು ಅನಿವಾರ್ಯವಾಗಿತ್ತು. ತದನಂತರ
ಸ್ಕ್ಯಾವೆಂಜರ್ ಹುದ್ದೆಗೆ ಬಂದ ಲೀಲಾಗೂ ಅಷ್ಟೇ ಸಂಬಳ ಕೊಡಲಾಗುತ್ತಿತ್ತು. ಇದೇ ಸಂಬಳ
ಸದ್ಯದವರೆಗೂ ಮುಂದುವರಿದುಕೊಂಡು ಬಂದಿದೆ.
ಶಾಲೆಯಲ್ಲಿದ್ದ ಹನ್ನೊಂದು ಕೊಠಡಿಗಳನ್ನು
ಶುಚಿಯಾಗಿಡುವುದು ಅಕ್ಕುವಿನ ಕೆಲಸವಾದ್ರೆ, ಎಂಟು ಮೂತ್ರಾಲಯ ಹಾಗೂ
ನಾಲ್ಕು ಪಾಯಿಖಾನೆಗಳನ್ನು ಆಗಾಗ ತೊಳೆಯುವುದು
ಲೀಲಾಳ ಕೆಲಸವಾಗಿತ್ತು. ಬೆಳಿಗ್ಗೆಯಿಂದ ಸಂಜೆಯವರೆಗೆ ಈ ಕೆಲಸ ನಡೆಯುತ್ತಿದ್ದರಿಂದ ಇದು ಅವರಿಬ್ಬರಿಗೆ
ಪೂರ್ಣಾವಧಿಯ ಕೆಲಸವೇ ಆಗಿದ್ದಿತು. ದಿನಾಂಕ 12-07-1971 ರಲ್ಲಿ ಅಂದಿನ
ಮುಖ್ಯೋಪಾಧ್ಯಾಯರು ಅಕ್ಕುಗೆ ಕೊಟ್ಟ ನೇಮಕಾತಿ ಪತ್ರದಲ್ಲೂ ಇದು ಹಂಗಾಮಿ ಕೆಲಸ ಎಂದು ಇದೆಯಲ್ಲದೆ ಅರೆಕಾಲಿಕ
ಅಥವಾ ಸಾಂದರ್ಭಿಕ ಕೆಲಸ ಅಂತ ಎಲ್ಲೂ ಹೇಳಿಲ್ಲ.
ಎಂತಹ ವಿಪರ್ಯಾಸ ನೋಡಿ. ‘ಕಾಯಕವೇ
ಕೈಲಾಸ’
ಎಂದು ಹೇಳಿದ ಬಸವಣ್ಣ ಇದ್ದಿದ್ದರೆ ಈ ತನ್ನ ವಚನ ಬದಲಾಯಿಸಿಕೊಳ್ಳಬೇಕಾದ
ಅನಿವಾರ್ಯತೆಗೆ ಸಿಲುಕಬೇಕಿತ್ತು! ಅಂತಹ ಅಸಹಾಯಕ ಪರಿಸ್ಥಿತಿ
ಅಕ್ಕು ಮತ್ತು ಲೀಲಾರದ್ದಾಗಿತ್ತು
ಆದರೆ ಈ ನತದೃಷ್ಟ ಹೆಣ್ಣುಮಕ್ಕಳ ಯಾತನೆಯ
ಕಥೆ ಅಲ್ಲಿಗೂ ಮುಗಿಯಲಿಲಲ್ಲ. ಆಶ್ಚರ್ಯ ಅಂದ್ರೆ, ಈ
ತೀರ್ಪಿನಂತೆ ಅವರ ಸೇವೆಯನ್ನು ಖಾಯಂಗೊಳಿಸಿ ನ್ಯಾಯವಾದ ವೇತನ
ನೀಡುವ ಬದಲಾಗಿ ರಾಜ್ಯ ಸರ್ಕಾರ ಕರ್ನಾಟಕ ಹೈಕೋರ್ಟಿನಲ್ಲಿ
ಮೇನ್ಮನವಿ ಸಲ್ಲಿಸಿತು. 2004ರಲ್ಲಿ ಪ್ರಕರಣದ ತೀರ್ಪು ನೀಡಿದ ಹೈಕೋರ್ಟ್ ರಾಜ್ಯ
ಸರ್ಕಾರದ ಮೇಲ್ಮನವಿಯನ್ನು
ತಿರಸ್ಕರಿಸಿ ಅಕ್ಕು ಹಾಗೂ ಲೀಲಾರ ಸೇವೆಯನ್ನು ಖಾಯಂಗೊಳಿಸುವಂತೆ
ಆಡಳಿತ ನ್ಯಾಯಮಂಡಳಿ ನೀಡಿದ ಆದೇಶವನ್ನು ಎತ್ತಿಹಿಡಿದಿತ್ತು. ಸ್ವಲ್ಪವೂ
ಹಿಂದೆ-ಮುಂದೆ ನೋಡದ ಕರ್ನಾಟಕ ಸರ್ಕಾರವು ಪ್ರಕರಣವನ್ನು
ಸುಪ್ರೀಂಗೆ ಕೊಂಡೊಯ್ಯುವ ‘ದೊಡ್ಡಮನಸ್ಸು’
ಮಾಡಿತ್ತು!
2010ರ ಜನವರಿ ತಿಂಗಳಲ್ಲಿ ಸುಪ್ರೀಂಕೋರ್ಟ್ ಕೂಡ ಇಬ್ಬರ ಸೇವೆಯನ್ನು ಖಾಯಂಗೊಳಿಸುವಂತೆ ಆದೇಶ ನೀಡಿತ್ತು. ಇದೀಗ ಸುಪ್ರೀಂಕೋರ್ಟಿನ ತೀರ್ಪು ಬಂದು 32 ತಿಂಗಳು ಕಳೆದಿವೆ. ಆದರೆ ಘನತೆವೆತ್ತ ಕರ್ನಾಟಕ ಸರ್ಕಾರ ಈ ಕಾರ್ಮಿಕರ ಸೇವೆಯನ್ನು ಇನ್ನೂ ಖಾಯಂಗೊಳಿಸಿಲ್ಲ! ಬದಲಾಗಿ 1998 ರಿಂದ ಅವರಿಬ್ಬರಿಗೆ ನೀಡುತ್ತಿದ್ದ 15 ರೂಪಾಯಿ ಖಾಯಂ ಮೂಲವೇತನವನ್ನೂ ನೀಡಿಲ್ಲ!
ಅಕ್ಕು ಮತ್ತು ಲೀಲಾ ಕಳೆದ 14 ವರ್ಷಗಳಿಂದ
ಸಂಬಳರಹಿತವಾಗಿಯೇ ದುಡಿಯುತ್ತಿದ್ದಾರೆ. ಅವರಿಬ್ಬರಿಗೂ
ಸಂಬಳ ನೀಡುವಂತೆ ಪ್ರಾಂಶುಪಾಲರು ಬರೆದ ಪತ್ರಕ್ಕೂ ಇಲಾಖಾ ಅಧಿಕಾರಿಗಳು ಉತ್ತರ ನೀಡುತ್ತಿಲ್ಲ.
ತಮ್ಮ ಜೀವಮಾನವೀಡೀ
ನ್ಯಾಯಯುತ ಸಂಬಳಕ್ಕಾಗಿ ಹೋರಾಡಿ ಇದೀಗ ನಿವೃತ್ತಿ ಅಂಚಿನಲ್ಲಿರುವ ಈ ಮಹಿಳೆಯರು ಕೇಳುತ್ತಿರುವ
ಪ್ರಶ್ನೆ –“ಈ
ದೇಶದಲ್ಲಿ ಸುಪ್ರಿಂಕೋರ್ಟ್ ಗಿಂತ ಉನ್ನತ ನ್ಯಾಯಾಲಯ ಯಾವುದಾದ್ರೂ
ಇದೆಯಾ ಸಾರ್?!”
ನಿಮಗೇನಾದ್ರೂ ಉತ್ತರ ಗೊತ್ತಿದ್ದರೆ ದಯಮಾಡಿ
ಮಾತಾಡಿ...